ಎಕಿಯೂರಾಯ್ಡಿಯ
	ಸಮುದ್ರದಲ್ಲಿ ವಾಸಿಸುವ ಹುಳುಗಳ ಒಂದು ವಂಶ. ಹಿಂದೆ ಇದನ್ನು ವಲಯವಂತಗಳ ವಂಶದೊಂದಿಗೆ ಸೇರಿಸಲಾಗಿತ್ತು. ಹೆಚ್ಚಿನ ಮಾಹಿತಿ ದೊರಕಿದ ಮೇಲೆ ಇದನ್ನು ಪ್ರತ್ಯೇಕ ವಂಶವಾಗಿಯೇ ಪರಿಗಣಿಸಲಾಗಿದೆ. ಪ್ರೌಢಾವಸ್ಥೆಯಲ್ಲಿ ಈ ವಂಶದ ಹುಳುಗಳ ದೇಹ ಇತರ ಹುಳುಗಳಂತೆ ಸಂಧ್ಯಾಂತರ ಖಂಡಗಳಾಗಿ ವಿಭಾಗವಾಗಿರುವುದಿಲ್ಲ. ದೇಹದ ಕೆಳಮೈಯಲ್ಲಿ ಕೆಲವು ವಲಯಗಳಲ್ಲಿ ಬಿರುಗೂದಲುಗಳಿರುತ್ತವೆ. ಇವು ಆಕಾರದಲ್ಲಿ ಕಂಬದಂತೆ ಅಥವಾ ಅಂಡದಂತೆ ಇವೆ. ಬಾಯಿ ದೇಹದ ಮುಂಭಾಗದಲ್ಲಿ ಇದೆ. ಬಾಯಿ ಮುಂದೆ ಉದ್ದವಾದ ಒಂದು ಸೊಂಡಲಿದೆ. ಕೆಲವು ಎಕಿಯೂರಾಯ್ಡಿಯಗಳಲ್ಲಿ ಸೊಂಡಿಲು ಚಿಕ್ಕದು. ಮಿಕ್ಕವುಗಳಲ್ಲಿ ಉದ್ದವಾಗಿದ್ದು ಸೂಕ್ಷ್ಮಗ್ರಾಹಿಯಾಗಿ, ಅಲುಗಾಡುತ್ತಿರುತ್ತದೆ. ಸೊಂಡಿಲಿನಲ್ಲಿರುವ ಅವಕಾಶ ದೇಹಾವಕಾಶದೊಂದಿಗೆ ಸಂಪರ್ಕ ಹೊಂದಿದೆ. ರಕ್ತನಾಳಗಳು, ಮುಚ್ಚಿದ ರೀತಿಯವಾಗಿವೆ. ಅನ್ನನಾಳದ ತಳಭಾಗದಲ್ಲಿ ನರರಜ್ಜುವಿದೆ. ಇದರಿಂದ ದೇಹದ ಭಾಗಗಳಿಗೆ ಜೋಡಿ ನರಗಳು ಹೊರಡುತ್ತವೆ. ದೇಹದ ಅಗ್ರಭಾಗದಲ್ಲಿ ನರಮುಡಿ ಇದ್ದು ಇದರಿಂದ ನರಗಳು ಸೊಂಡಿಲು ಮತ್ತು ದೇಹದ ಭಾಗಗಳಿಗೆ ಹೊರಡುತ್ತವೆ. ಗುದನಾಳಕ್ಕೆ ಹೊಂದಿರುವಂತೆ ಎರಡು ಅಂಧಾಂತಗಳಿರುತ್ತವೆ. ಇವಕ್ಕೆ ಗುದಕೋಶಕ ಎಂದೂ ಹೆಸರು. ಇವು ಸಾರಜನಕದ ವಿಸರ್ಜನೆಮಾಡುತ್ತವೆ.

ಚಿತ್ರ - 1

	ಜೀರ್ಣಾಂಗಗಳು: ಬಾಯಿ ಹಿಂಭಾಗದಲ್ಲಿರುವ ಗಂಟಲ ಕುಹರಕ್ಕೆ ತೆರೆಯುತ್ತದೆ. ಅದು ಎರಡು ಕೊಂಡಿಗಳಾಗಿ ವಿಸ್ತರಿಸಿಕೊಂಡಿದ್ದು ಅದರ ಹಿಂಭಾಗ ವಿಸ್ತಾರಗೊಂಡು ಅನ್ನನಾಳವಾಗುತ್ತದೆ. ಅದರ ಹಿಂದಿನ ತುದಿಯ ಭಾಗವೇ ಎದೆಯಚೀಲ. ಇವಿಷ್ಟೂ ಹೊರತೊಕ್ಕು ಒಳಚಾಚಿಕೊಂಡು ಆಗಿರುವ ಜೀರ್ಣಾಂಗದ ಭಾಗಗಳು; ಇನ್ನುಳಿದ ಜೀರ್ಣಾಂಗ ಮೂರು ಭಾಗವಾಗಿದೆ- ಮುಂದಿನ ಕರುಳು, ಮಧ್ಯದ ಕರುಳು, ಮತ್ತು ಹಿಂದಿನ ಕರುಳು. ಮಧ್ಯ ಕರುಳು ಕಿರಿದಾದ ಸಹಾಯಕನಾಳವನ್ನು ಹೊಂದಿದ್ದು ಜೀರ್ಣಕ್ಷೇತ್ರದ ವಿಸ್ತಾರವನ್ನು ಹೆಚ್ಚಿಸುವಂತಿದೆ. ಈ ಸಹಾಯಕನಾಳ ಈ ವಂಶದ ಪ್ರಾಣಿಗಳ ಒಂದು ವಿಶಿಷ್ಟ ಲಕ್ಷಣ. ಹಿಂದಿನ ಕರುಳು ಗುದನಾಳಕ್ಕೆ ತೆರೆಯುತ್ತದೆ. ಕರುಳಿನ ರಸದಲ್ಲಿ ಕ್ಷಾರವಸ್ತು, ಮೇದಸ್ಸು, ಸಸಾರಜನಕ ವಸ್ತುಗಳನ್ನು ಜೀರ್ಣಿಸಬಲ್ಲ ಕಿಣ್ವವೂ ಇರುತ್ತವೆ. ಪಿಷ್ಟಪದಾರ್ಥವನ್ನು ಜೀರ್ಣಿಸುವ ಕಿಣ್ವ ಈ ಪ್ರಾಣಿಯಲ್ಲಿ ಇರುವುದೇ ಎಂಬುದು ಇನ್ನೂ ನಿರ್ಧಾರವಾಗಿ ಗೊತ್ತಾಗಿಲ್ಲ.

	ದೇಹಾವಕಾಶ ದ್ರವ: ಈ ದ್ರವದಲ್ಲಿ ಆಮ್ಲಜನಕದೊಡನೆ ಸಂಯೋಗವಾಗುವ ಹಿಮೋಗ್ಲೋಬಿನ್‍ನಂಥ ವಸ್ತುವುಂಟು. ಕೆಲವು ಪ್ರಭೇದಗಳಲ್ಲಿ ಇದು ಇಲ್ಲ. ದ್ರವದಲ್ಲಿ ಜಲಕಣಗಳು ತೇಲುತ್ತಿರುತ್ತವೆ. ಉಚ್ಫ್ವಾಸನಿಶ್ವಾಸ, ಶುದ್ಧೀಕರಣ ಮತ್ತು ಪೋಷಕ ಕಾರ್ಯಗಳನ್ನು ಈ ದ್ರವ ನಿರ್ವಹಿಸುತ್ತದೆ. ದೇಹಭಾಗ ಸಂಕುಚಿಸುತ್ತ ಹೋಗುವುದರಿಂದ ಚರ್ಮ ಆಮ್ಲಜನಕವನ್ನು ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರದೂಡುತ್ತದೆ. ಈ ಪ್ರಾಣಿ ಒಂದೆಡೆ ನಿಶ್ಚೇಷ್ಟಿತವಾಗಿ ಅಡಗಿರುವಾಗ ಹೇಮೋಗ್ಲೋಬಿನ್ ಆಮ್ಲಜನಕವನ್ನು ಬಹು ನಿಧಾನವಾಗಿ ಒದಗಿಸಿ ಅಗತ್ಯಕಾಲಕ್ಕೆ ಸಂಗ್ರಹಿಸಿಟ್ಟಿರುತ್ತದೆ.

	ವಿಸರ್ಜನಾಂಗಗಳು: ಗುದನಾಳಕ್ಕೆ ಒಂದುಜೊತೆ ಒಳ ತೊಕ್ಕಿನಿಂದ ಉಂಟಾಗುವ ಕೋಶಗಳು ತೆರೆಯುತ್ತವೆ. ಆಗತಾನೆ ರೂಪಪರಿವರ್ತನೆ ಹೊಂದಿದ ಡಿಂಬದಲ್ಲಿ ಈ ಕೋಶಗಳು ದೇಹಾವಕಾಶದೊಡನೆ ಸಂಪರ್ಕ ಹೊಂದಿರುತ್ತವೆ. ನೆಫ್ರೋಸ್ಟೋಮ್ ಎಂಬ ಎರಡು ನಾಳಗಳು ಅವೆರಡಕ್ಕೂ ಸಂಪರ್ಕ ಕಲ್ಪಿಸುತ್ತವೆ. ಪ್ರೌಢಾವಸ್ಥೆಯಲ್ಲಿ ಇಂಥ ನೆಫ್ರೋಸ್ಟೋಮ್ ಕೊಳವೆಗಳ ಸಂಖ್ಯೆ ಅಧಿಕವಾಗಿರುತ್ತದೆ. ಈ ಅಂಗಗಳು ವಿಸರ್ಜನಾ ಕಾರ್ಯದೊಂದಿಗೆ ಜೊತೆಗೆ ಉಸಿರಾಟವನ್ನೂ ನಿರ್ವಹಿಸುತ್ತವೆ. 

	ರಕ್ತಪರಿಚಲನಾಂಗ: ದೇಹದ ತಳಭಾಗದಲ್ಲಿ ನರದ ಕೆಳಗೆ ಉದ್ದಕ್ಕೂ ತಳದಲ್ಲಿ ಒಂದು ನಾಳ ಸಾಗುತ್ತದೆ; ಮುಂಭಾಗದಲ್ಲಿ ಅದು ಕತ್ತಿನ ಬಳಿ ಒಡೆದು ಒಂದು ಉಂಗುರದ ರೂಪ ತಾಳಿ ಪ್ರೋಸ್ಟೋಮಿಯಮ್ಮನ್ನು ಸುತ್ತುವರಿದಿದೆ. ಮಧ್ಯ ಕರುಳನ್ನು ಆವರಿಸಿಕೊಂಡು ಬರುವ ಮತ್ತೊಂದು ನಾಳದಿಂದ ಹೊರಡುವ ಮೇಲಿನ ರಕ್ತನಾಳ ದೇಹದುದ್ದಕ್ಕೂ ಹಾಯುತ್ತದೆ. ಆ ನಾಳ ರಕ್ತವನ್ನು ಮುಂಭಾಗಕ್ಕೆ ತಳ್ಳುತ್ತದೆ; ಹಾಗೆ ತಳ್ಳಿದ ರಕ್ತ ತಳಭಾಗದಲ್ಲಿರುವ ದೀರ್ಘನಾಳದ ಮುಂಭಾಗವನ್ನು ಸೇರುತ್ತದೆ. ಹೀಗೆ ರಕ್ತಚಲನೆಯ ನಾಳಗಳು ಪೂರ್ಣವಾಗಿ ಆವೃತವಾದ ನಾಳವ್ಯೂಹವೆನಿಸಿದೆ.

	ನರವ್ಯೂಹ ಮತ್ತು e್ಞÁನೇಂದ್ರಿಯಗಳು: ತಳಭಾಗದಲ್ಲೊಂದು ನೀಳ ನರವಿದೆ. ಇದರಲ್ಲಿ ನರಮುಡಿಗಳಿಲ್ಲ. ಮುಂಭಾಗದಲ್ಲಿ ಎರಡಾಗಿ ಕವಲೊಡೆದು ಗಂಟಲನ್ನು ಸುತ್ತಿಕೊಂಡು ಪ್ರೋಸ್ಟೋಮಿಯಮ್ಮಿನ ಅಂಚುಗಳಿಗೆ ನರದ ಕವಲುಗಳನ್ನು ಕಳಿಸುತ್ತದೆ. ಮಿದುಳೆನ್ನಬಹುದಾದ ಯಾವ ಕೇಂದ್ರೀಕೃತ ನರಮುಡಿಯೂ ಇದರಲ್ಲಿ ಇಲ್ಲ. ಭ್ರೂಣಾವಸ್ಥೆಯಲ್ಲಿ ತಳದ (ಉದರದ) ನರ ಹೊರತೊಕ್ಕಿನ ಮಂದಗೊಂಡ ಆವರಣಗಳಿಂದ ಮೂಡಿ ರೂಪಪರಿವರ್ತನೆಗೆ ಮುನ್ನ ಹಲವು ನರಮುಡಿಗಳನ್ನು ಹೊಂದಿರುತ್ತದೆ. ಎಕಿಯೂರಸ್ಸಿನಲ್ಲಿ ಅಂಥ 16 ಕ್ಷಣಿಕ ನರಮುಡಿಗಳೂ ಯೂರಿಕಿಸ್‍ನಲ್ಲಿ 12 ನರಮುಡಿಗಳೂ ಕಂಡುಬರುತ್ತವೆ. ಮೇಲುತೊಕ್ಕಿನಲ್ಲಿ ಸ್ಪರ್ಶಶಕ್ತಿಯನ್ನೂ ರಾಸಾಯನಿಕ ಸಂವೇದನ ಶಕ್ತಿಯನ್ನೂ ಹೊಂದಿರುವ ಕೋಶಗಳು ಪ್ರೋಸ್ಟೋಮಿಯಮ್ಮಿನ ಅಂಚಿನಲ್ಲಿ, ಅಧಿಕಸಂಖ್ಯೆಯಲ್ಲಿವೆ. ಡಿಂಬಾವಸ್ಥೆಯಲ್ಲಿ ಬೆಳಕನ್ನು ಗುರುತಿಸಬಲ್ಲ ಕಣ್ಣಿನಂಥ ಕೇಂದ್ರಗಳು ಕಂಡುಬಂದರೂ ಪ್ರೌಢಾವಸ್ಥೆಯಲ್ಲಿ ನಶಿಸಿಹೋಗಿರುತ್ತದೆ.

	ಬಿರುಗೂದಲುಗಳು: ಬಾಯ ಹಿಂಭಾಗದಲ್ಲಿ ಮಣ್ಣನ್ನು ಕೊರೆಯಲು ಶಕ್ತವಾಗಿರುವ ಕೆಳಮುಖದ ಎರಡು ಬಿರುಗೂದಲುಗಳುಂಟು. ಹಿಂಭಾಗದಲ್ಲಿ ಎರಡು ಅಪೂರ್ಣ ವೃತ್ತಗಳಲ್ಲಿ ಹರಡಿರುವ ಅನೇಕ ಸಣ್ಣಸಣ್ಣ ಬಿರುಗೂದಲುಗಳಿವೆ. ಕೊರೆದ ಮಣ್ಣನ್ನು ಚೊಕ್ಕಟಮಾಡಲು ಅವು ಉಪಯೋಗಕ್ಕೆ ಬರುತ್ತವೆ. ಪ್ರತಿ ಬಿರುಗೂದಲೂ ಒಂದೇ ಒಂದು ಕೋಶವಾಗಿದ್ದು ವಿಸರ್ಜಿತವಸ್ತುವಿನಿಂದ ಮೂಡಿರುತ್ತದೆ. ಈ ಬಿರುಗೂದಲುಗಳು ಎರೆಹುಳುಗಳ ಸೀಟೆಗಳನ್ನು ಹೋಲುತ್ತವೆ. ಕೂದಲನ್ನು ಚಲಿಸಲು ಅಗತ್ಯವೆನಿಸುವ ಸ್ನಾಯುಗಳು, ನೀರಿಸ್‍ನಲ್ಲಿರುವಂತೆ, ಇವುಗಳಲ್ಲೂ ಉಂಟು.

	ವಂಶಾಭಿವೃದ್ಧಿ: ಬಾಯ ಹಿಂಭಾಗದಲ್ಲಿ ದೇಹದ ಗೋಡೆ ಸಂಕೋಚಗೊಂಡು ಒಂದು ಉಂಗುರದಂತಾಗಿ ಅದರ 
ಮುಂಭಾಗದಲ್ಲಿರುವ ವೃತ್ತಸ್ನಾಯು ಹಿಂಡಿದಂತಾಗಿ ಮುಂದಿನ ಭಾಗವನ್ನು ಹೊರನೂಕುತ್ತದೆ. ಆಗ ಹೊರಬಂದ ದೇಹ ಭಾಗ ಪ್ರತ್ಯೇಕಗೊಂಡು ಆಹಾರಸೇವನೆಯನ್ನು ಆರಂಭಿಸುತ್ತದೆ. ಇದು ಈ ಪ್ರಾಣಿಯ ವಂಶಾಭಿವೃದ್ಧಿಯ ಸೋಜಿಗ.
	ಈ ವಂಶವನ್ನು ಮೂರು ಗಣಗಳಾಗಿ ವಿಭಾಗಿಸಲಾಗಿದೆ. ಇವುಗಳೆಂದರೆ ಗಣ 
1: ಎಕಿಯೂರಿನ; ಗಣ 
2: ಥೆಲೆಸ್ಮೇಟಿಡೆ; ಗಣ 
3: ಬೊನಿಲ್ಲಿಡೆ.
	ಎಕಿಯೂರಿಡ: ಸಾಮಾನ್ಯವಾಗಿ ಸಮುದ್ರಗಳಲ್ಲಿ ಜೀವಿಸುತ್ತವೆ. ಉದಾ: ಇರಿಯುರಿಯಸ್: ಇದಕ್ಕೆ ಸ್ಥಂಭಾಕೃತಿಯ ದೇಹವಿದೆ, ಈ ದೇಹಕ್ಕೆ ಹೊಂದಿಕೊಂಡಿರುವಂತೆ ಇರುವ ಒಂದು ಚಿಕ್ಕ ಸೊಂಡಿಲು ಇದೆ. ಲಿಂಗ ಭೇದವಿದ್ದರೂ ಬಾಹ್ಯರೂಪದಲ್ಲಿ ವ್ಯತ್ಯಾಸವಿಲ್ಲ. ದೇಹದ ಮುಂಭಾಗದಲ್ಲಿ ಒಂದು ಜೊತೆ ಪ್ರಮುಖ ಬಿರುಗೂದಲು ಮತ್ತು ಗುದದ್ವಾರದ ಹತ್ತಿರ ಮೂರು ನಾಲ್ಕು ಸುತ್ತು ಬಿರುಗೂದಲುಗಳೂ ಇವೆ.

	ಥೆಲೆಸ್ಸೆಮಿಟಿಡಿ: ಉಷ್ಣವಲಯದ ಸಮುದ್ರಗಳಲ್ಲಿ ಜೀವಿಸುತ್ತವೆ. ಉದಾ: ಥಲೆಸ್ಸೆಮ ಇದಕ್ಕೆ ಚಿಕ್ಕ ಸೊಂಡಿಲಿರುತ್ತದೆ. ಆದರೆ ಗುದದ್ವಾರದ ಸುತ್ತಲು ಬಿರುಗೂದಲುಗಳು ಇರುವುದಿಲ್ಲ. ಮೂರು ಜೊತೆ ಶುದ್ಧೀಕರಣಕಾರ್ಯಮಾಡುವ ನಿಫ್ರಿಡಿಯಾಗಳಿವೆ. ಬಾಯಿಯ ಕೆಳಭಾಗದಲ್ಲಿ ಕಿವಿರುಗಳಂತಿರುವ ಕೋಡುಗಳು ಇವೆ. ಭಾರತದ ನದೀಮುಖಜಭೂಮಿಗಳಲ್ಲಿ ಈ ವಂಶಕ್ಕೆ ಸೇರಿದ ಪ್ರಾಣಿಗಳು ವಾಸಿಸುತ್ತವೆ.

	ಬೊನೆಲ್ಲಿಡೆ: ಉದಾ: ಬೊನಿಲಿಯ. ಇದರ ಮುಖ್ಯ ಗುಣ-ಗಂಡು ಹೆಣ್ಣಿನಲ್ಲಿರುವ ರೂಪ ವಿವಿಧತೆ. ಹೆಣ್ಣು ಬೊನಿಲಿಯ ಕಡುಹಸಿರು ಬಣ್ಣದ ಅಂಡಾಕೃತಿಯ ಪ್ರಾಣಿ. ಇದರ ಸೊಂಡಿಲು ಸುಮಾರು 6 ಅಂಗುಲಕ್ಕಿಂತ ಉದ್ದವಾಗಿದ್ದು ಅದರ ತುದಿ ಇಬ್ಭಾಗವಾಗಿದೆ. ಇದರ ದೇಹದ ಕೆಳಭಾಗದಲ್ಲಿ ಎರಡೋ ಅಥವಾ ಹೆಚ್ಚು ಬಿರುಗೂದಲುಗಳಿರುತ್ತವೆ. ದೇಹದಲ್ಲಿ ಒಂದೇ ಒಂದು ನೆಫ್ರಿಡಿಯಾ ಇದ್ದು ಅದು ದೊಡ್ಡದಾಗಿ ಬೆಳೆದು ಗರ್ಭಕೋಶದ ಕಾರ್ಯವನ್ನು ಮಾಡುತ್ತದೆ. ಗುದದ್ವಾರದ ಹತ್ತಿರ ಅಂಡಾಕಾರದ ಗುದಕೋಶಗಳಿವೆ. ಇವುಗಳ ಮೇಲೆ ಕವಲೊಡೆದ ಸಣ್ಣನಾಳಗಳಿವೆ. ಇದು ಹರಿತ್ತಿನಂಥ ರಾಸಾಯನಿಕ ವಸ್ತು. ಇದಕ್ಕೆ ಬೊನೆಲೈನ್ ಎಂದು ಕರೆಯುತ್ತಾರೆ. ಈ ಬಣ್ಣ ಎಚ್ಚರಿಕೆ ನೀಡುವ ವರ್ಣತಂತ್ರ ಎಂಬ ಅಭಿಪ್ರಾಯವಿದೆ.

	ಗಂಡು ಬೊನಿಲಿಯಾ ಹೆಣ್ಣಿಗಿಂತ ಬಲು ಚಿಕ್ಕದು. ಇದು ಸೂಕ್ಷ್ಮಜೀವಿ; ಸೊಂಡಿಲಿಲ್ಲ. ಆದರೆ ಒಂದು ಜೊತೆ ಬಿರುಗೂದಲಿದೆ. ಗಂಡು ಹೆಣ್ಣಿನ ದೇಹವನ್ನೊ ಅಥವಾ ಅದರ ಸೊಂಡಿಲನ್ನೊ ಆಶ್ರಯಿಸಿ ಜೀವಿಸುತ್ತದೆ. ಈ ಪರತಂತ್ರ ಜೀವನದ ಫಲವಾಗಿ ಇದಕ್ಕೆ ಬಾಯಿಯಾಗಲೀ, ಗುದದ್ವಾರವಾಗಲೀ ಇರುವುದಿಲ್ಲ. ಇದರ ಜೀರ್ಣಾಂಗಗಳು ಕ್ಷೀಣಸಿವೆ. ಗಂಡು ಪ್ರೌಢಾವಸ್ಥೆಗೆ ಬಂದೊಡನೆಯೇ ಹೆಣ್ಣಿನ ಗರ್ಭಕೋಶದ ಹೊರ ಆವರಣದಲ್ಲಿ ನೆಲೆಸುತ್ತದೆ. ಭ್ರೂಣದ ಬೆಳೆವಣಿಗೆ ವಲಯವಂತಗಳ ಬೆಳೆವಣಿಗೆಯನ್ನು ಹೋಲುತ್ತದೆ. ಈ ಭ್ರೂಣ ಬೆಳೆದು ಡಿಂಬ (ಲಾರ್ವ)ವಾಗುತ್ತದೆ. ಈ ಡಿಂಬ ತಾಯಿಯ ದೇಹದಿಂದ ಹೊರಬಂದು ಸ್ವತಂತ್ರವಾಗಿ ಈಜಿ ಜೀವನ ನಡೆಸುತ್ತದೆ. ಇದು ಗಂಡಾಗಲೀ ಅಥವಾ ಹೆಣ್ಣಾಗಲೀ ಆಗುವ ಶಕ್ತಿಯನ್ನು ಪಡೆದಿರುತ್ತದೆ. ಲಾರ್ವ ಯಾವ ಹೆಣ್ಣಿನ ಸಂಪರ್ಕವನ್ನೂ ಪಡೆಯದೇ ಬೆಳೆದರೆ-ಅದರಲ್ಲಿ ರೂಪಪರಿವರ್ತನೆಯಾಗಿ ಹೆಣ್ಣಾಗುತ್ತದೆ. ಬಾಯಿಯ ಮುಂಭಾಗ ಉದ್ದವಾಗಿ ಬೆಳೆದು ಸೊಂಡಿಲಾಗುತ್ತದೆ. ಈ ಹೆಣ್ಣು ಬೆಳೆದು ಪ್ರೌಢವಸ್ಥೆಗೆ ಬರುತ್ತಿದ್ದಂತೆಯೇ ದೇಹದ ಕೆಳಭಾಗದಲ್ಲಿ ಬಿರುಗೂದಲುಗಳು ಬೆಳೆಯುತ್ತವೆ. ಆದರೆ ಯಾವುದಾದರೂ ಲಾರ್ವ ತನ್ನ ಸ್ವತಂತ್ರ ಜೀವನದ ಅನಂತರ ಹೆಣ್ಣು ಬೊನಿಲಿಯಾದ ದೇಹ ಅಥವಾ ಸೊಂಡಿಲಿನ ಸಂಪರ್ಕ ಪಡೆದರೆ ಅದು ಹೆಣ್ಣಿನ ಸೊಂಡಿಲಿಗೆ ಅಂಟಿಕೊಳ್ಳುತ್ತದೆ. ಸೊಂಡಿಲಿನಲ್ಲಿ ಉತ್ಪತ್ತಿಯಾದ ಉದ್ದೀಪಕ ವಸ್ತು ಡಿಂಬವು ಹೆಣ್ಣಾಗಿ ರೂಪ ಪರಿವರ್ತನೆಯಾಗುವುದನ್ನು ತಡೆಹಿಡಿಯುತ್ತದಲ್ಲದೆ ಮರಿಹುಳುವಿನ ವ್ಯವಸ್ಥೆಯಲ್ಲಿಯೇ ಪುರುಷೇಂದ್ರಿಯಗಳ ಬೆಳೆವಣಿಗೆಗೆ ಕಾರಣವಾಗಿ ಗಂಡು ಬೊನಿಲಿಯಾ ಆಗುತ್ತದೆ. ಈ ಗಂಡು ಬೊನಿಲ್ಲಾ ಪ್ರೌಢವಸ್ಥೆಯನ್ನು ಹೊಂದಿದ ಅನಂತರ ಹೆಣ್ಣಿನ ಅನ್ನನಾಳದ ಮೂಲಕ ಗರ್ಭಕೋಶದ ಹೊರಾವರಣವನ್ನು ತಲುಪುತ್ತದೆ. ಹೀಗೆ ಬೊನಿಲಿಯಾದಲ್ಲಿ ಲಿಂಗ ನಿರ್ಧಾರವು ಪರಿಸರದ ಪ್ರಭಾವದಿಂದ ಪ್ರೇರಿತವಾಗಿರುತ್ತದೆ. 

	ಎಕಿಯುರಿಡ ವಂಶ ವಲಯವಂತಗಳ ವಂಶದೊಡನೆ ಅನೇಕ ಸಮಾನ ಗುಣಗಳನ್ನು ಹೊಂದಿದೆ. ಕೆಲವು ಗುಣಗಳಿಂದ ಇದು ಅವನತಿ ಹೊಂದಿದ ವಲಯವಂತವಾಗಿರಬಹುದೇ ಎಂಬ ಸಂಶಯ ಬರುತ್ತದೆ. ಆದರೆ ತನ್ನ ಇತರ ಗುಣಗಳಿಂದ ಇದು ಚಪ್ಪಟೆ ಹುಳುಗಳನ್ನೂ ಮೃದ್ವಂಗಿಗಳನ್ನೂ ಹೋಲುವುದನ್ನು ನೋಡಿದರೆ ಇದು ಇತರೆ ವಂಶಗಳಿಗಿಂತ ವಲಯವಂತಗಳಿಗೆ ಸಮೀಪವಾಗಿದೆ ಎಂದು ಮಾತ್ರ ಹೇಳಬಹುದು. 								
	(ಸಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ